ಡಿಕನ್ಸ್, ಚಾಲ್ರ್ಸ್
1812-1870. ಇಂಗ್ಲಿಷ್ ಕಾದಂಬರಿಕಾರ. ಪೋಟ್ರ್ಸ್‍ಮತ್ ಬಳಿ ಲ್ಯಾಂಡ್‍ಪೋರ್ಟಿನ ಒಬ್ಬ ಗುಮಾಸ್ತೆಯ ಮಗ. ಸರಿಯಾದ ವಿದ್ಯಾಭ್ಯಾಸವಿಲ್ಲದೆ ಚಿಕ್ಕಂದಿನಲ್ಲಿ ಪಟ್ಟ ಕಷ್ಟಗಳು ಸೂಕ್ಷ್ಮ ಸ್ವಭಾವದ ಈ ಹುಡುಗನ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿ ಡೇವಿಡ್ ಕಾಪರ್ ಫೀûಲ್ಡನ ಬಾಲ್ಯ ಚಿತ್ರಣಕ್ಕೆ ಸ್ಫೂರ್ತಿ ಕೊಟ್ಟವು. ಡಿಕನ್ಸ್ ಕಾಲವನ್ನು ವ್ಯರ್ಥಮಾಡದೆ ಫೀಲ್ಡಿಂಗ್ ಸ್ಮಾಲೆಟ್ ಮುಂತಾದವರ ಕಾದಂಬರಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ. ಆ ವಯಸ್ಸಿನಲ್ಲೇ ನಾಟಕರಂಗದಲ್ಲೂ ಆಸಕ್ತಿ ಹುಟ್ಟಿತು. ಸಾಲಗಳ ಫಲವಾಗಿ ಈತನ ತಂದೆ ಸೆರೆಮನೆ ಸೇರಬೇಕಾಯಿತು. ಈ ಅನುಭವಗಳನ್ನು ಲಿಟ್ಲ್ ಡಾರಿಟ್‍ನಲ್ಲಿ ಹೃದಯಂಗಮವಾಗಿ ಚಿತ್ರಿಸಿದ್ದಾನೆ. ತಂದೆಯ ಬಿಡುಗಡೆಯಾದ ಮೇಲೆ ಡಿಕನ್ಸ್ ನ್ಯಾಯಕಚೇರಿ ಸೇರಿ ಪಾರ್ಲಿಮೆಂಟಿನ ವರದಿಕಾರನಾದ. ಈ ಕಾಲದಲ್ಲಿ ಮಂತ್ಲಿ ಮ್ಯಾಗಜಿûೀನ್ ಮತ್ತು ಈವನಿಂಗ್ ಕ್ರಾನಿಕಲ್ ಎಂಬ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ. ಇವೇ 1836ರಲ್ಲಿ ಸ್ಕೆಚಸ್ ಬೈ ಬಾಜ್ ಎಂಬ ಸಂಕಲನವಾಗಿ ಪ್ರಕಟವಾದುವು. ಕ್ಯಾತರೀನ್ ಹೋಗಾರ್ತ್ ಎಂಬಾಕೆಯನ್ನು ಮದುವೆಯಾಗಿ (1836) ಸಂಸಾರದಲ್ಲಿ ಸುಖ ಕಾಣದೆ ಡಿಕನ್ಸ್ ವಿವಾಹ ವಿಚ್ಛೇದನ ಮಾಡಿಕೊಂಡ (1858).

	1836-37ರ ಅವಧಿಯಲ್ಲಿ ಖ್ಯಾತಿ ತಂದುಕೊಟ್ಟ ಪಿಕ್‍ವಿಕ್ ಪೇಪರ್ಸ್ ಮಾಸಿಕ ಭಾಗಗಳಾಗಿ ಪ್ರಕಟವಾಯಿತು. ಆಗಲೇ ಆಲಿವರ್ ಟ್ವಿಸ್ಟ್ ಕಾದಂಬರಿ ಬೆಂಟ್ಲೇಸ್ ಮಿಸಲೆನಿಯಲ್ಲಿ ಪ್ರಕಟವಾಗಿ ಸಾಹಿತ್ಯ ಪ್ರಪಂಚದಲ್ಲಿ ಆತನ ಹೆಸರು ಉನ್ನತ ಸ್ಥಾನಕ್ಕೇರಿತು. ಅಲ್ಲಿಂದಾಚೆ ಪ್ರತಿವರ್ಷವೂ ಕಾದಂಬರಿಗಳು ಬೆಳಕಿಗೆ ಬರಲಾರಂಭಿಸಿದುವು. ನಿಕಲಸ್ ನಿಕಲ್ಬಿ (1838-39), ದಿ ಓಲ್ಡ್ ಕ್ಯೂರಿಯಾಸಿಟಿ ಷಾಪ್ ಮತ್ತು ಬಾರ್ನಬಿ ರಜ್ (1840), ಮಾರ್ಟಿನ್ ಚಸóಲ್‍ವಿಟ್ (1843), ಕ್ರಿಸ್ಮಸ್ ಕೆರೊಲ್ (1843), ದಿ ಚೈಮ್ಸ್ (1844), ದಿ ಕ್ರಿಕೆಟ್ ಆನ್ ದಿ ಹಾರ್ತ್, ದಿ ಬ್ಯಾಟಲ್ ಆಫ್ ಲೈಫ್, ದಿ ಹಾಂಟೆಡ್ ಮ್ಯಾನ್, ಡಾಂಬಿ ಅಂಡ್ ಸನ್ (1848), ಡೇವಿಡ್ ಕಾಪರ್‍ಫೀಲ್ಡ್ (ಗ್ರಂಥರೂಪದಲ್ಲಿ, 1849-50), ಬ್ಲೀಕ್ ಹೌಸ್ (1852-53), ಹಾರ್ಡ್ ಟೈಮ್ಸ್ (1854), ಲಿಟ್ಲ್ ಡಾರಿಟ್ (ಪೂರ್ಣಕೃತಿ 1856-57), ಎ ಟೇಲ್ ಆಫ್ ಟೂ ಸಿಟೀಸ್ (1859), ಗ್ರೇಟ್ ಎಕ್ಸ್‍ಪೆಕ್ಟೇಷನ್ಸ್ (1860-61), ಅವರ್ ಮ್ಯೂಚುಯಲ್ ಫ್ರೆಂಡ್(1864-65)-ಹೀಗೆ. 1869ರಲ್ಲಿ ಮಿಸ್ಟರಿ ಆಫ್ ಎಡ್ವಿನ್ ಡ್ರೂಡ್ ಎಂಬ ಕಾದಂಬರಿಯನ್ನು ಅರ್ಧ ಮುಗಿಸಿ ಡಿಕನ್ಸ್ ಮೃತಿ ಹೊಂದಿದ.

	ಎ ಟೇಲ್ ಆಫ್ ಟೂ ಸಿಟೀಸ್ ಒಂದು ಉತ್ತಮ ಚಾರಿತ್ರಿಕ ಕಾದಂಬರಿ. ಕಾರ್ಲೈಲ್‍ನ ಫ್ರೆಂಚ್ ಮಹಾಕ್ರಾಂತಿಯನ್ನು ಡಿಕನ್ಸ್ ತುಂಬ ಮೆಚ್ಚಿದ್ದನಲ್ಲದೆ ಅದರ ಪ್ರಭಾವಕ್ಕೆ ಒಳಗಾಗಿದ್ದ. ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸಿ ಅವರು ಹುಚ್ಚು ಛಲ ಹಿಡಿಯುವಂತೆ ಮಾಡಿದ ದುಷ್ಟ ಶ್ರೀಮಂತರ ಚಿತ್ರ ಡಿಕನ್ಸನ ಈ ಕಾದಂಬರಿಯಲ್ಲಿದೆ. ದಬ್ಬಾಳಿಕೆ ನಡೆಸುವವರನ್ನು ಹಿಂಬಾಲಿಸುವ ಛಲದ ಚೇತನದ ಅಭಿವ್ಯಕ್ತ ಮೂರ್ತಿ ಮದಾಂ ಡ ಪಾರ್ಜ್. ಉದಾತ್ತ ಶ್ರೀಮಂತನೂ ಜನತೆಯ ರೋಷಕ್ಕೆ ಬಲಿಯಾಗುತ್ತಾನೆ. ಈ ಶ್ರೀಮಂತನ ಪತ್ನಿಯಲ್ಲಿ ನಿಃಸ್ವಾರ್ಥ ಮೆಚ್ಚಿಕೆ ಪಡೆದಿದ್ದ ಇಂಗ್ಲಿಷ್ ವಕೀಲ ಸಿಡ್ನಿ ಕಾಟ್ರ್ನ್, ಸೆರೆಮನೆಯಲ್ಲಿ ಈ ಶ್ರೀಮಂತನ ಸ್ಥಾನವನ್ನು ವಹಿಸಿಕೊಂಡು ಗಿಲಟಿನ್‍ಗೆ ಆಹುತಿಯಾಗಿ, ಶ್ರೀಮಂತನನ್ನು ಉಳಿಸುತ್ತಾನೆ.

	1841ರಲ್ಲಿ ಅಮೆರಿಕಕೆ ಹೋದಾಗ ಡಿಕನ್ಸ್‍ಗೆ ವಿಶ್ವಾಸದ ಸ್ವಾಗತ ದೊರಕಿತು. ಆದರೆ ಆತ ಅಮೆರಿಕದ ಜೀವನವನ್ನು ಅವಹೇಳನ ಮಾಡಿ ಅಮೆರಿಕನ್ ನೋಟ್ಸ್ ಮತ್ತು ಮಾರ್ಟಿನ್ ಚಸಲ್‍ವಿಟ್ ಕೃತಿಗಳಲ್ಲಿ ಬರೆಯಲು ಅಲ್ಲಿಯ ಜನಾದರಣೆ ಸ್ವಲ್ಪಕಾಲ ತಗ್ಗಿತು. 1844ರಲ್ಲಿ ಇಟಲಿಗೆ ಹೋಗಿ ಜಿನೋವಾದಲ್ಲಿ ಕೆಲವು ಕ್ರಿಸ್ಮಸ್ ಕತೆಗಳನ್ನು ಬರೆದ. 1846ರಲ್ಲಿ ಡೇಲಿ ನ್ಯೂಸ್ ಪತ್ರಿಕೆಯ ಮುಖ್ಯ ಸಂಪಾದಕನಾಗಿ, ಸ್ವಲ್ಪ ದಿನಗಳಲ್ಲೇ ರಾಜಿನಾಮೆ ಕೊಟ್ಟು ಸ್ವಿಟ್ಸರ್ಲೆಂಡಿಗೆ ಹೋಗಿ ಅಲ್ಲಿ ಡಾಂಬಿ ಅಂಡ್ ಸನ್ ಕಾದಂಬರಿಯನ್ನು ಬರೆದ. ಕೆಲವು ಕಾಲ ಒಂದು ನಾಟಕ ಸಂಘವನ್ನೂ ನಿರ್ವಹಿಸಿ 1856ರಲ್ಲಿ ಗ್ಯಾಡ್ಸ್‍ಹಿಲ್ ಪ್ಲೇಸ್ ಎಂಬ ಮನೆಯನ್ನು ಕೊಂಡುಕೊಂಡು ಅಲ್ಲೇ ನೆಲೆಸಿದ. 1858ರಿಂದ ತನ್ನ ಕಾದಂಬರಿಗಳ ಬಹಿರಂಗ ವಾಚನಕ್ಕೆ ತೊಡಗಿ ಆ ಕಾರ್ಯಕ್ರಮದಿಂದ ಅಮೆರಿಕದಲ್ಲಿ 20,000 ಪೌಂಡು ಗಳಿಸಿದನಾದರೂ ಅತೀವ ಶ್ರಮದಿಂದಾಗಿ ಆತನ ಆರೋಗ್ಯ ತೀರ ಕೆಟ್ಟಿತು.

	ಡಿಕನ್ಸನ ವಿಚಾರವನ್ನು ತ್ಯಾಕರೆ ಸ್ಪಷ್ಟವಾಗಿ ಚಿತ್ರಿಸಿದ್ದಾನೆ: ಜೀವನಕ್ಕೆ ನಿಕಟ ಸಂಬಂಧಪಡೆದ ರಾಗಗಳನ್ನು, ದ್ವೇಷಾಸೂಯೆಗಳ ಸಮಸ್ಯೆಗಳನ್ನು ವರ್ಣಿಸಿರುವುದರಿಂದ ಡಿಕನ್ಸನ ಕಾದಂಬರಿಗಳು ಮನಮುಟ್ಟುತ್ತವೆ. ಸಮಾಜ ಸುಧಾರಣೆಯಲ್ಲಿ ತೀವ್ರಾಸಕ್ತಿ, ತುಂಬಿ ಹರಿಯುವ ಹಾಸ್ಯ, ಎಣೆಯಿಲ್ಲದ ವರ್ಣನಾ ಚಾತುರ್ಯ, ಜೀವಂತ ಪಾತ್ರರಚನಾಕೌಶಲ- ಇವುಗಳಿಂದ ಡಿಕನ್ಸನ ಕಾದಂಬರಿಗಳು ಪ್ರತಿ ತಲೆಮಾರಿನ ಜನರ ಹೃದಯವನ್ನೂ ಸೆರೆಹಿಡಿದಿವೆ. ಆತನ ಕಾದಂಬರಿಗಳ ಜಗತ್ತು ಲಂಡನ್ನಿನ ಸಂದುಗೊಂದುಗಳು. ಅಲ್ಲಿಯ ವ್ಯಕ್ತಿಜೀವನವನ್ನು ಆತ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾನೆ.

	ಡಿಕನ್ಸನ ಬರೆಹದಲ್ಲಿರುವ ಕೊರತೆಯೆಂದರೆ- ಭಾವನೆಗಳನ್ನು ಅತಿರೇಕ ಮಾಡಿ ಚಿತ್ರಿಸುವುದು, ಅತಿಶಯೋಕ್ತಿಯಿಂದ ಪಾತ್ರಗಳೂ ವ್ಯಂಗ್ಯಚಿತ್ರಗಳಾಗುವಂತೆ ತೋರಿಸುವುದು, ಸುಂದರವಾದ ಸಂಭಾಷಣೆಗಳನ್ನು ಚಿತ್ರಿಸುವುದರಲ್ಲಿ ಕುಶಲತೆ ಇದ್ದರೂ ಉದ್ವೇಗ ಸಮಯದಲ್ಲಿ ನಾಟಕೀಯ ಮಾತುಗಳಿಗೆ ಎಡೆಕೊಡುವುದು. ಕಡೆಯಲ್ಲಿ ಪಾತ್ರಗಳನ್ನೆಲ್ಲ ಒಂದೆಡೆ ಸೇರಿಸಿ ನ್ಯಾಯರೀತಿಯಲ್ಲಿ ಶಿಕ್ಷೆ, ಬಹುಮಾನ ವಿನಿಯೋಗ ಮಾಡುವುದು.

	ಆದರೆ ಡಿಕನ್ಸನ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ವೆಲರ್, ಮಿಸೆಸ್ ಗ್ಯಾಂಪ್, ಮಿಕಾಬರ್ ಮುಂತಾದವರು ಅಮರ ವ್ಯಕ್ತಿಗಳು. ಕೃತಿಗಾರನಿಗೆ ಜೀವನದಲ್ಲಿದ್ದ ಆನಂದ, ಆಸಕ್ತಿಗಳು ವರ್ಣನಾಕೌಶಲದಿಂದ ಜನರನ್ನು ಸದಾಕಾಲವೂ ಮರುಳುಗೊಳಿಸುವ ಕಾದಂಬರಿಗಳಿಗೆ ಕಾರಣವಾದುವು. ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಆತನ ಹೆಸರು ಚಿರಸ್ಥಾಯಿಯಾಗಿದೆ. ಜಿ.ಕೆ. ಚೆಸ್ಟರ್‍ಟನ್ ಆತನ ಬರೆಹದ ವಿಚಾರವಾಗಿ ವಿದ್ವತ್ಪೂರಿತ ಗ್ರಂಥವನ್ನು ಬರೆದಿದ್ದಾನೆ. 

	ಡೇವಿಡ್ ಕಾಪರ್‍ಫೀಲ್ಡ್ ತನಗೆ ಅತ್ಯಂತ ಪ್ರಿಯವಾದ ಕಾದಂಬರಿಯೆಂದು ಮುನ್ನುಡಿಯಲ್ಲಿ ಡಿಕನ್ಸನೇ ಹೇಳಿಕೊಂಡಿದ್ದಾನೆ. ಸ್ವಲ್ಪಮಟ್ಟಿಗೆ ಇದು ಆತನ ಜೀವನ ಕತೆಯೂ ಆಗಿದೆ.

	ಡೇವಿಡ್ ಹುಟ್ಟುವ ಆರು ತಿಂಗಳ ಮೊದಲೇ ಆತನ ತಂದೆ ಸತ್ತುಹೋಗಿರುತ್ತಾನೆ. ತಾಯಿ ಕ್ಲಾರ ಏನೂ ಅರಿಯದ ಯುವತಿ. ಸೋದರತ್ತೆ ಹೆರಿಗೆಯ ವೇಳೆಗೆ ಬಂದರೂ ಮಗು ಹೆಣ್ಣಲ್ಲವೆಂಬ ಬೇಸರದಿಂದ ಹೊರಟುಹೋಗುತ್ತಾಳೆ. ಕೆಲವು ವರ್ಷಗಳ ಅನಂತರ ಕ್ಲಾರ, ಮರ್ಡ್‍ಸ್ಟನ್ ಎಂಬಾತನನ್ನು ಮದುವೆಯಾಗುತ್ತಾಳೆ. ಆತನ ತಂಗಿಯೂ ಮನೆ ಸೇರಿ ಅವಳೇ ಮನೆಯ ಅಧಿಕಾರವನ್ನೆಲ್ಲ ವಹಿಸಿಕೊಳ್ಳುತ್ತಾಳೆ. ಡೇವಿಡ್ಡನ ವಿದ್ಯಾಭ್ಯಾಸವನ್ನು ಮರ್ಡ್‍ಸ್ಟನ್ ವಹಿಸಿಕೊಂಡು ಶಿಸ್ತಿನ ನಿಪದಲ್ಲಿ ನಾನಾವಿಧವಾಗಿ ಹಿಂಸಿಸುತ್ತಾನೆ. ಈ ಸಮಯದಲ್ಲಿ ಡೇವಿಡ್ಡನಿಗಿದ್ದ ಒಂದೇ ಆಸರೆ ಸೇವಕಿ ಪೆಗೋಟಿ. ಕಡೆಗೆ ಡೇವಿಡ್ಡನನ್ನು ಶಾಲೆಗೆ ಕಳುಹಿಸುತ್ತಾರೆ. ಅಲ್ಲಿ ಅವನಿಗೆ ಸ್ಟೀರ್‍ಪೋರ್ತ್ ಮತ್ತು ಟ್ರ್ಯಾಡಲ್ಸ್ ಎಂಬ ಹುಡುಗರ ಸ್ನೇಹವಾಗುತ್ತದೆ. ಪೆಗೋಟಿಯ ಅಣ್ಣ, ಆತನ ಸೋದರಳಿಯ ಹ್ಯಾಮ್ ಮತ್ತು ಅಣ್ಣನ ಮಗಳು ಎಮಿಲಿಯ ಪರಿಚಯವಾಗಿ ಅವರೊಡನೆ ಕೆಲವು ಸುಖದ ದಿನಗಳನ್ನು ಕಳೆಯುತ್ತಾನೆ. ರಜೆಗೆ ಮನೆಗೆ ಬರುವ ವೇಳೆಗೆ ಒಬ್ಬ ಪುಟ್ಟ ತಮ್ಮ ಹುಟ್ಟಿರುತ್ತಾನೆ. ಅನಂತರ ಡೇವಡ್ಡನ ಕಡೆ ಯಾರೂ ಲಕ್ಷ್ಯಕೊಡದೆ ಅವನನ್ನು ಒಂದು ಅಂಗಡಿಯಲ್ಲಿ ಕೆಲಸಕ್ಕೆ ಹಾಕುತ್ತಾರೆ. ಅಲ್ಲಿ ಮಿಕಾಬರ್ ಸಂಸಾರದ ಪರಿಚಯವಾಗಿ, ಅವರ ಮನೆಯ ಒಂದು ಕೋಣೆಯಲ್ಲಿದ್ದು ಅವರ ಸುಖದುಃಖಗಳಲ್ಲಿ ಭಾಗಿಯಾಗುತ್ತಾನೆ. ಅಲ್ಲಿಯ ಜೀವನ ಬೇಸರವಾಗಿ ಸೋದರತ್ತೆಯ ಬಳಿಗೆ ಹೋಗುತ್ತಾನೆ. ಬೆಟ್ಸಿ ಟ್ರಾಟ್‍ವುಡ್ ಅವನ ಯೋಗಕ್ಷೇಮ ವಹಿಸಿಕೊಂಡು ವಿದ್ಯಾಭ್ಯಾಸ ಮಾಡಿಸುತ್ತಾಳೆ. ಈ ಸಮಯದಲ್ಲಿ ವಿಕ್ ಫೀಲ್ಡ್, ಆತನ ಮಗಳು ಆ್ಯಗ್ನೆಸ್ ಮತ್ತು ನೌಕರ ಉರಯ ಹೀಪ್ ಇವರ ಪರಿಚಯವಾಗುತ್ತದೆ. ಅವರ ಮನೆಯಲ್ಲೇ ಇದ್ದು ಡಾಕ್ಟರ್ ಸ್ಟ್ರಾಂಗನ ಶಾಲೆಗೆ ಹೋಗುತ್ತಾನೆ. ಬಹಿರಂಗದಲ್ಲಿ ಅತಿ ವಿನಯ ತೋರುವ ಉರಯನ ವಿಚಾರದಲ್ಲಿ ಡೇವಿಡ್ಡನಿಗೆ ವಿಶ್ವಾಸವುಂಟಾಗುವುದಿಲ್ಲ. ವಿದ್ಯಾಭ್ಯಾಸ ಮುಗಿದ ಅನಂತರ ಡೇವಿಡ್ ಒಂದು ಬಾರಿ ಪೆಗೋಟಿಯ ಮನೆಗೆ ಹೋಗುವಾಗ ಸ್ನೇಹಿತ ಸ್ಟೀರ್ ಫೋರ್ತ್‍ನನ್ನೂ ಕರೆದುಕೊಂಡು ಹೋಗುತ್ತಾನೆ. ಎಮಿಲಿ ಹಾಗೂ ಹ್ಯಾಮ್‍ರ ಮದುವೆ ನಿಶ್ವಯವಾಗುತ್ತದೆ. ಆದರೆ ಅವಳು ಸ್ಟೀರ್‍ಫೋರ್ತ್‍ನ ಸವಿ ಮಾತುಗಳಿಗೆ ಮರುಳಾಗಿ ಅವನೊಡನೆ ಓಡಿಹೋಗುತ್ತಾಳೆ. ಅವಳನ್ನು ಹುಡುಕಿಕೊಂಡು ಪೆಗೋಟಿಯ ಅಣ್ಣ ಹೊರಡುತ್ತಾನೆ.

	ಸ್ಪೆನ್ಲೊ ಎಂಬ ವಕೀಲನ ಬಳಿ ಡೇವಿಡ್ ಕೆಲಸಕ್ಕೆ ಸೇರುತ್ತಾನೆ. ಆತನ ಮಗಳು ಡೋರಾಳಲ್ಲಿ ಅನುರಕ್ತನಾಗುತ್ತಾನೆ. ಆದರೆ ಅವಳ ಸಂಗಾತಿಯಾಗಿ ನಿಯಮಿಸಲ್ಪಟ್ಟಿದ್ದ ಮಿಸ್ ಮರ್ಡ್‍ಸ್ಟನ್ ಅವನ ತಂದೆಗೆ ವಿಚಾರ ತಿಳಿಸುತ್ತಾಳೆ. ಆ ಮದುವೆ ಸಾಧ್ಯವಿಲ್ಲವೆಂದು ಆತ ಡೇವಿಡ್‍ಗೆ ಹೇಳುತ್ತಾನೆ. ಮಿಸ್ ಟ್ರಾಟ್‍ವುಡ್ ಹಣ ಕಳೆದುಕೊಂಡುದರಿಂದ ಸ್ಟೆನ್ಲೊ ಬಳಿ ಕೆಲಸವನ್ನು ಡೇವಿಡ್ ಬಿಡಬೇಕಾಗುತ್ತದೆ. ಡೋರಾಳ ತಂದೆ ಗಾಡಿಯಿಂದ ಬಿದ್ದು ಮರಣ ಹೊಂದುತ್ತಾನೆ. ಆತನ ಐಶ್ವರ್ಯವೆಲ್ಲ ನಷ್ಟವಾಗಿದ್ದುದರಿಂದ ಡೋರಾ ತನ್ನ ಇಬ್ಬರು ಸೋದರತ್ತೆಯರ ಬಳಿಗೆ ಹೋಗುತ್ತಾಳೆ. ಉರಯ ವಿಕ್‍ಫೀಲ್ಡ್‍ನ ಮೇಲೆ ಪ್ರಭಾವ ಬೆಳೆಸಿಕೊಂಡು ಸರ್ವಾಧಿಕಾರಿಯಾಗುತ್ತಾನೆ. ಆ್ಯಗ್ನೆಸಳನ್ನು ಮದುವೆಯಾಗಲು ಕೂಡ ಹವಣಿಸಿರುತ್ತಾನೆ. ವಿಕ್‍ಫೀಲ್ಡ್ ಕುಡುಕನಾಗಿ ಉರಯನ ಕೈಗೊಂಬೆಯಾಗಿರುತ್ತಾನೆ.

	ಸ್ವಲ್ಪ ದಿನಗಳಲ್ಲಿ ಸ್ಟೀರ್‍ಫೋರ್ತ್‍ನಿಗೆ ಎಮಿಲಿಯಲ್ಲಿ ಬೇಸರವುಂಟಾಗಿ ಆತ ಅವಳನ್ನು ಬಿಟ್ಟು ಹೊರಟುಹೋಗುತ್ತಾನೆ. ಎಮಿಲಿ ಮಾವನಿಗೆ ಸಿಕ್ಕಿ ಮನೆ ಸೇರುತ್ತಾಳೆ. ಸಮುದ್ರದ ಅಪಘಾತಕ್ಕೆ ಗುರಿಯಾದ ಸ್ಟೀರ್‍ಫೋರ್ತ್‍ನನ್ನು ಉಳಿಸಲು ಹೋಗಿ ಹ್ಯಾಮ್‍ನೂ ಸಾಯುತ್ತಾನೆ. ಪೆಗೋಟಿಯ ಅಣ್ಣ ಸಂಸಾರ ಸಮೇತವಾಗಿ ಆಸ್ಟ್ರೇಲಿಯಕ್ಕೆ ಹೊರಟುಹೋಗುತ್ತಾನೆ.

	ಡೇವಿಡ್ ಡೋರಾಳನ್ನು ಮದುವೆಯಾಗಿ ಸಂಸಾರ ಹೂಡತ್ತಾನಲ್ಲದೆ ಈ ವೇಳೆಗೆ ಬರೆಹಗಾರನೆಂದು ಪ್ರಸಿದ್ಧಿಗೆ ಬಂದಿರುತ್ತಾನೆ. ಸಂಸಾರವನ್ನು ಆಟವೆಂದೇ ತಿಳಿದಿದ್ದ ಮುಗ್ಧ ಡೋರಾ ಕೆಲವು ವರ್ಷಗಳಲ್ಲೇ ಮೃತಿ ಹೊಂದುತ್ತಾಳೆ. 

	ಡಾ. ಸ್ಟ್ರಾಂಗನ ಹೆಂಡತಿಯ ನಡತೆ ಚೆನ್ನಾಗಿಲ್ಲವೆಂದು ಉರಯ ಆತನಿಗೆ ಹೇಳುತ್ತಾನೆ. ಆದರೆ ಚಿಕ್ಕ ಹುಡುಗಿಯನ್ನು ಮದುವೆಯಾದುದು ತನ್ನದೇ ತಪ್ಪೆಂದು ಆತ ಆಕೆಯಲ್ಲಿ ಎಂದಿಗಿಂತ ಹೆಚ್ಚು ವಿಶ್ವಾಸ ತೋರಿಸುತ್ತಾನೆ.

	ವಿಕ್‍ಫೀಲ್ಡ್ ಬಳಿ ಕೆಲಸಕ್ಕೆ ಸೇರಿದ್ದ ಮಿಕಾಬರ್ ಉರಯನ ಮೋಸವನ್ನೆಲ್ಲ ಬಯಲುಮಾಡಿ ಬೆಟ್ಸಿ ಟಾರ್‍ವುಡ್ಡಳ ಹಣ ಹಿಂದಕ್ಕೆ ಬರುವಂತೆ ಮಾಡುತ್ತಾನೆ. ಮಿಕಾಬರ್ ಸಂಸಾರದೊಡನೆ ಆಸ್ಟ್ರೇಲಿಯಕ್ಕೆ ಹೋಗುತ್ತಾನೆ. ಡೇವಿಡ್ ಆ್ಯಗ್ನೆಸಳನ್ನು ಮದುವೆಯಾಗಿ ಸುಖವಾಗಿರುತ್ತಾನೆ.

	ಇಲ್ಲಿನ ಡೇವಿಡ್ ಕಾಪರ್‍ಫೀಲ್ಡ್ ಡಿಕನ್ಸನನ್ನು ಹೋಲಿದರೆ ಮುಂದಾಲೋಚನೆ ಇಲ್ಲದ, ಅತ್ಯಧಿಕ ಆಶಾವಾದಿಯಾದ ಆದರೆ ಒಳ್ಳೆಯ ಸ್ವಭಾವದ ಮಿಕಾಬರ್ ಡಿಕನ್ಸನ ತಂದೆಯನ್ನು ಕೆಲವು ಅಂಶಗಳಲ್ಲಿ ಹೋಲುತ್ತಾನೆ.

	ಆಲಿವರ್ ಟ್ವಿಸ್ಟ್ ಬಹು ಜನಪ್ರಿಯ ಕಾದಂಬರಿ. ಅನಾಥಾಲಯದಲ್ಲಿ ಜನಿಸಿ ತಂದೆತಾಯಿಗಳು ಯಾರೆಂದು ಅರಿಯದ ಅನಾಥ ಬಾಲಕ ಆಲಿವರ್. ಕ್ರೌರ್ಯ ಹಾಗೂ ಹಿಂಸೆಯ ಪ್ರತೀಕವೆನಿಸಿದ ಅಂದಿನ ಅನಾಥಾಲಯಗಳು ಮುಗ್ಧ ಮಕ್ಕಳನ್ನು ಹಿಂಸೆಗೆ ಗುರಿಪಡಿಸಿ, ಕೆಲಸ ಕಲಿಯಲು ಅವರನ್ನು ಯಾವುದಾದರೂ ವ್ಯಾಪಾರಸಂಸ್ಥೆಗೆ ಹಾಕುತ್ತಿದ್ದರು. ಆಲಿವರ್ ಕೂಡ ಅಂಥ ವ್ಯಾಪಾರ ಸಂಸ್ಥೆಯ ಬಂಬಲ್ ಎಂಬುವನ ಕೈಗೆ ಸಿಕ್ಕಿ ಬಹು ತೊಂದರೆಗೊಳಗಾಗುತ್ತಾನೆ. ಕೊನೆಗೆ ತಡೆಯಲಾರದೆ ಕಂಬಿಕಿತ್ತು ಲಂಡನ್ ನಗರಕ್ಕೆ ಧಾವಿಸುತ್ತಾನೆ. ಲಂಡನ್ನಿನಲ್ಲೂ ದುರದೃಷ್ಟದಿಂದ ದೊಡ್ಡ ಕಳ್ಳರ ಗುಂಪಿನ ಕೈಗೆ ಸಿಕ್ಕಿಬೀಳುತ್ತಾನೆ. ಆ ಗುಂಪಿನ ಯಜಮಾನ ಜ್ಯೂ ಫ್ಯಾಗಿನ್. ಆಲಿವರ್‍ನನ್ನು ಕಳ್ಳನನ್ನಾಗಿ ಮಾಡಲು ಆ ಗುಂಪಿನವರು ಎಲ್ಲ ಯತ್ನಗಳನ್ನು ನಡೆಸುತ್ತಾರೆ. ಆದರೆ ಬ್ರೌನ್‍ಲೋ ಎಂಬಾತನ ಸಹಾಯದಿಂದ ತಾತ್ಕಾಲಿಕವಾಗಿ ಆಲಿವರ್ ಕಳ್ಳರ ಗುಂಪಿನಿಂದ ವಿಮುಕ್ತನಾಗುತ್ತಾನಾದರೂ ಸಮಯ ಕಾದು ಕಳ್ಳರು ಮತ್ತೆ ಅವನನ್ನು ಹಿಡಿಯುತ್ತಾರೆ. ಸಮಾಜದ ದೃಷ್ಟಿಯಲ್ಲಿ ಅವನನ್ನು ಕೆಟ್ಟವನನ್ನಾಗಿ ಮಾಡಲು ಎಲ್ಲ ಯತ್ನಗಳನ್ನೂ ಮಾಡಬೇಕೆಂದು ಮಾಂಕ್ಸ್ ಎಂಬಾತ ಹಣದ ಆಸೆ ತೋರಿಸಿ ಕಳ್ಳರ ಗುಂಪಿನವರನ್ನು ಪ್ರಚೋದಿಸುತ್ತಾನೆ. ಬಿಲ್ ಸೈಕ್ಸ್ ಯಾವಾಗಲೂ ತನ್ನ ಜೊತೆಯಲ್ಲೇ ಆಲಿವರ್‍ನನ್ನು ಕರೆದೊಯ್ಯತೊಡಗುತ್ತಾನೆ. ಒಮ್ಮೆ ಒಂದು ಕಳ್ಳತನದಲ್ಲಿ ತೊಡಗಿದ್ದಾಗ ಸಿಕ್ಕಿಕೊಳ್ಳುವ ಪ್ರಸಂಗ ಒದಗಿ ಬಂದು ಎಲ್ಲರೂ ಪರಾರಿಯಾಗಿ ಆಲಿವರ್ ಮಾತ್ರ ಗುಂಡಿನ ಏಟಿಕೆ ಸಿಕ್ಕಿ ಗಾಯಗೊಳ್ಳುತ್ತಾನೆ. ಮೇಯ್ಲಿ ಎಂಬಾಕೆ ಆಲಿವರ್‍ನನ್ನು ಹಿಡಿದು ತನ್ನ ನೌಕರಾಣಿಯಾದ ರೋಸಳ ವಶಕ್ಕೆ ಒಪ್ಪಿಸುತ್ತಾಳೆ. ರೋಸಳು ಆಲಿವರ್‍ನನ್ನು ಚೆನ್ನಾಗಿ ಕಂಡು ಅವನ ಜೀವಿತದ ಬಗ್ಗೆ ಆಶಾಭಾವನೆಯನ್ನು ಮೂಡಿಸುತ್ತಾಳೆ. ಆಲಿವರ್‍ನ ತಂದೆತಾಯಿಗಳ ವಿಷಯ ಮಾಂಕ್ಸ್‍ನಿಗೆ ಗೊತ್ತಿದೆಯೆಂಬ ವಿಚಾರವನ್ನು ನ್ಯಾನ್ಸಿ ರೋಸಳಿಗೆ ತಿಳಿಸಿ, ಆ ಬಗ್ಗೆ ಇದ್ದ ದಾಖಲಾತಿಗಳನ್ನೆಲ್ಲ ಹಾಳು ಮಾಡಲು ಪ್ರೇರೇಪಿಸುತ್ತಾಳಲ್ಲದೆ ಆಲಿವರ್‍ನಿಗೂ ರೋಸಳಿಗೂ ಏನೋ ಸಂಬಂಧವಿದೆಯೆಂದೂ ಶಂಕಿಸುತ್ತಾಳೆ. ಈ ಬಗ್ಗೆ ಬೆಳಕನ್ನು ಕಾಣಲು ರೋಸಳು ಯತ್ನಿಸುತ್ತಾಳೆ. ಕೆಲಕಾಲಾನಂತರ ನ್ಯಾನ್ಸಿ ಹೇಳಿರುವ ಗುಟ್ಟೆಲ್ಲ ಕಳ್ಳರ ಗುಂಪಿಗೆ ತಿಳಿದು ಗುಟ್ಟು ರಟ್ಟಾಗದಿರಲೆಂದು ಬಿಲ್ ಸೈಕ್ಸ್ ನ್ಯಾನ್ಸಿಯನ್ನು ಕೊಲೆ ಮಾಡುತ್ತಾನೆ. ಕೊಲೆಯ ಬಗ್ಗೆ ದೊಡ್ಡ ಕೋಲಾಹಲವೇ ಆಗುತ್ತದೆ. ಸೈಕ್ಸ್ ತಲೆತಪ್ಪಿಸಿಕೊಳ್ಳಲು ಯತ್ನಿಸಿ, ಸಿಕ್ಕಿಬೀಳುವ ಕಾಲ ಬಂದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಉಳಿದವರನ್ನೆಲ್ಲ ಪೋಲಿಸರು ವಶಪಡಿಸಿಕೊಳ್ಳುತ್ತಾರೆ. ಫ್ಯಾಗಿನ್‍ಗೆ ಸೆರೆವಾಸವಾಗುತ್ತದೆ. ಮಾಂಕ್ಸ್‍ನನ್ನು ಹಿಡಿದು ಆಲಿವರ್‍ನ ಜನ್ಮದ ಬಗ್ಗೆ ವಿವರವನ್ನು ಕೇಳಲಾಗಿ ಆತ ಆಲಿವರ್‍ನ ಮಲಸಹೋದರನೆಂದೂ ಆಸ್ತಿಯನ್ನು ತಾನೊಬ್ಬನೇ ಎತ್ತಿಹಾಕುವ ಉದ್ದೇಶದಿಂದ ಆಲಿವರ್‍ನನ್ನು ಹಾಳುಮಾಡಲು ಯತ್ನಿಸಿದನೆಂದೂ ತಿಳಿದುಬರುತ್ತದೆ. ರೋಸಳು ಆಲಿವರ್‍ನ ತಾಯಿಯ ತಂಗಿಯೆಂದೂ ಗೊತ್ತಾಗುತ್ತದೆ. ಮಾಂಕ್ಸ್‍ನನ್ನು ಸೆರೆಗೆ ಹಾಕಲಾಗಿ ಅಲ್ಲೇ ಅವನು ಸಾಯುತ್ತಾನೆ. ಇತ್ತ ಬಂಬಲ್ ತನ್ನ ಜೀವಿತವನ್ನು ಅನಾಥಾಲಯದಲ್ಲೇ ಕಳೆದು ಸಾಯುತ್ತಾನೆ.

	ಹೀಗೆ ಎಲ್ಲವೂ ಕೊನೆಗೊಂಡು ಆಲಿವರ್ ವಿಷವೃತ್ತದಿಂದ ಹೊರಬರುತ್ತಾನೆ. ಯಾವ ಅಪರಾಧವನ್ನೂ ಮಾಡದ ಹಸುಳೆಯೊಬ್ಬ ದುಷ್ಟರ ಕೈಗೆ ಸಿಲುಕಿ ಪಡುವ ಹಿಂಸೆ, ಹಾಗೂ ಧರ್ಮಸಂಸ್ಥೆಗಳು ಎನೆಸಿಕೊಂಡವು ಮಾಡುವಂಥ ಹೀನಕಾರ್ಯಗಳನ್ನು ಬೆಳಕಿಗೆ ತರುವ ಯತ್ನವನ್ನು ಬಹಳ ಯಶಸ್ವಿಯಾಗಿ ಡಿಕನ್ಸ್ ಈ ಕಾದಂಬರಿಯಲ್ಲಿ ನಿರ್ವಹಿಸಿದ್ದಾನೆ.
(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ